ನೀರ್ದಲೆ -
ಶಿಶುವಿನ ಮಿದುಳ ಕುಹರದಲ್ಲಿ ಮಿದುಳುರಸ ಅಧಿಕವಾಗಿ ಸಂಗ್ರಹವಾಗುವುದರಿಂದ ಪರಿಣಮಿಸುವ ವ್ಯಾದಿ (ಹೈಡ್ರೊಕಿಫಾಲಸ್). ಪಿಂಡಾವಸ್ಥೆಯಲ್ಲಿ ಅಥವಾ ಶೈಶವಾವಸ್ಥೆಯಲ್ಲಿ ಸೆರಿಬ್ರೊಸ್ಪೈನಲ್ ದ್ರವದ ಚಲನೆಗೆ ಅಡಚಣೆ ಉಂಟಾಗುವುದರಿಂದ ಈ ವ್ಯಾಧಿ ಪರಿಣಮಿಸುವುದು. ಪಿಂಡಾವಸ್ಥೆಯಲ್ಲಿ ಮಿದುಳಿನ ಮತ್ತು ಮಿದುಳಬಳ್ಳಿಯ ಬೆಳವಣಿಗೆಯ ವ್ಯತ್ಯಯಗಳಿಂದಲೂ ಶೈಶವಾವಸ್ಥೆಯಲ್ಲಿ ಮೆನಿನ್ ಜೈಟಿಸ್ ಎಂಬ ಮಿದುಳಿನ ಮೇಲ್ಪೊರೆಯ ರೋಗದಿಂದಲೂ ದ್ರವ ಚಲನೆಗೆ ಅಡ್ಡಿ ಉಂಟಾಗುತ್ತದೆ. ಈ ವ್ಯಾಧಿಯಲ್ಲಿ ಶಿಶುವಿನ ತಲೆ ಅತಿ ಶೀಘ್ರವಾಗಿ ಅಸಾಧಾರಣವಾದ ಗಾತ್ರವನ್ನು ಗಳಿಸುವುದು. ಸೆರಿಬ್ರೊಸ್ಪೈನಲ್ ದ್ರವ ಮಿದುಳಿನ ಕುಹರದಲ್ಲಿ ಅಧಿಕವಾಗಿ ಸಂಗ್ರಹಗೊಳ್ಳುವುದರ ಪರಿಣಾಮವಾಗಿ ಮಿದುಳಿನ ಮೇಲೆ ಹೆಚ್ಚು ಒತ್ತಡ ಉಂಟಾಗಿ ಅದರ ಕಣಗಳಿಗೆ ಹಾನಿಯಾಗುತ್ತದೆ. ಇದರಿಂದ ಶಿಶುವಿಗೆ ಕೈಕಾಲು, ರುಂಡ ಮುಂಡಗಳ ಮಾಂಸಖಂಡಗಳ ಮೇಲೆ ಸ್ವಾಧೀನ ತಪ್ಪಬಹುದು. ವ್ಯಾಧಿ ಮಿತಿಮೀರಿದಲ್ಲಿ ಶಿಶುವಿನ ಬುದ್ಧಿ ತ್ರಾಣ ವೃದ್ಧಿಗೆ ಕೂಡ ಧಕ್ಕೆ ಉಂಟಾಗಿ ಬುದ್ಧಿ ವಿಕಲ್ಪವಾಗಬಹುದು. ಈ ವ್ಯಾಧಿಯ ಚಿಕಿತ್ಸೆ ಎಂದರೆ ಮುಖ್ಯವಾಗಿ ಅಡಚಣೆಗೆ ಕಾರಣವನ್ನು ಶೋಧಿಸಿ ಅದನ್ನು ಪರಿಹರಿಸುವುದು. ಏನೂ ಕಾರಣ ಕಂಡುಬರದಿದ್ದಲ್ಲಿ ಶಸ್ತ್ರಕ್ರಿಯೆಯ ಆಧುನಿಕ ವಿಧಾನಗಳಿಂದ ಆದಷ್ಟು ಮಟ್ಟಿಗೆ ಈ ವ್ಯಾಧಿಯ ಪರಿಣಾಮಗಳನ್ನು ಮಿತಿಗೊಳಿಸಬಹುದು. ದ್ರ್ರವವನ್ನು ಮೆದುಳ ಕುಹರದಿಂದ ಸಣ್ಣನೆಯ ನಾಳಗಳನ್ನು ಅಳವಡಿಸಿ ಉದರದ ಒಡಲಿಗೆ ಹಿಡಿದಿಡಲಾಗುತ್ತದೆ. ಇದರಿಂದ ಮೆದುಳ ಮೇಲಿನ ಒತ್ತಡ ಕಡಿಮೆಯಾಗುತ್ತದೆ. ಆದ್ದರಿಂದ ಮೆದುಳು ಮಾಮೂಲಿಯಂತೆ ಕಾರ್ಯನಿರ್ವಹಿಸುತ್ತವೆ.
(ವೈಎನ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ